Popular Posts

ಮೂರು ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ - ವೃದ್ಧ ದಂಪತಿ ಮನೆಗೆ ಬೆಳಕಾದ ಕಿಚ್ಚ.


ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಕೆಲ ವರ್ಷಗಳಿಂದ ಬೆಳಕಿಲ್ಲದ ಮನೆಗೆ ಸುದೀಪ್ ಬೆಳಕಾಗುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ.


ಸುದೀಪ್ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಟ್ರಸ್ಟ್ ಕೂಡ ಕೆಲವು ತಿಂಗಳಿನಿಂದ ಸಮಾಜ ಸೇವೆಯಲ್ಲಿ ನಿರತವಾಗಿದೆ. ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವೃದ್ಧ ದಂಪತಿಗೆ ಸಹಾಯ ಮಾಡಿದ್ದಾರೆ.


ವೃದ್ಧ ದಂಪತಿ ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿಕೊಂಡಿದ್ದರು. ಆದರೆ ಅದಕ್ಕೆ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗದೆ ಅಂದಿನಿಂದ ಅಂದರೆ ಸುಮಾರು ಮೂರು ವರ್ಷದಿಂದ ಕತ್ತಲಲ್ಲಿಯೇ ಜೀವನ ಸಾಗಿಸುತ್ತಿದ್ದರು. ಈ ವಿಷಯ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗಮನಕ್ಕೆ ಬಂದಿದೆ.

ಟ್ರಸ್ಟ್ ನ ಯುವಕರು ತಕ್ಷಣ ವೃದ್ಧ ದಂಪತಿಯಾದ ರಾಧಮ್ಮ ಹಾಗೂ ನಾಗರಾಜು ಅವರ ಮನೆಗೆ ಭೇಟಿ ನೀಡಿದ್ದಾರೆ. ನಂತರ ಅವರ ಸಮಸ್ಯೆಯನ್ನು ಆಲಿಸಿ, ತಾವೇ ತಮ್ಮ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಹಾಕಿಸಿಕೊಟ್ಟಿದ್ದಾರೆ. ಅಲ್ಲದೇ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅನುಮತಿಗಳನ್ನೂ ಸಹ ಅವರೇ ತೆಗೆದುಕೊಂಡಿದ್ದಾರೆ.

ವೃದ್ಧ ದಂಪತಿ ತಮ್ಮ ವಿಕಲಾಂಗ ಮೊಮ್ಮಗನೊಂದಿಗೆ ವಾಸಿಸುತ್ತಿದ್ದಾರೆ. ಟ್ರಸ್ಟ್ ಮೂಲಕ ಸುದೀಪ್ ಸಹಾಯ ಮಾಡಿದ್ದಕ್ಕೆ ಕಿಚ್ಚನಿಗೆ ಮತ್ತು ಟ್ರಸ್ಟ್ ಯುವಕರಿಗೆ ವೃದ್ಧ ದಂಪತಿ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ವೃದ್ಧ ದಂಪತಿಗೆ ಸಹಾಯ ಮಾಡಿರುವ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಸುದೀಪ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.